ನೆನಪು -
	ಹಿಂದೆ ಆಗಿಹೋದ ಅನುಭವಗಳನ್ನು ಹಿಡಿದಿಟ್ಟುಕೊಳ್ಳುವ ಮತ್ತು ವಾಪಸು ತಂದುಕೊಳ್ಳುವ ಸಾಮಥ್ರ್ಯ (ಮೆಮೊರಿ). ಗಮನವಿಟ್ಟು ನೋಡುವುದರ ಮೂಲಕ ಪಡೆಯುವ ದತ್ತಾಂಶಗಳನ್ನು ಪ್ರಜ್ಞೆಗೆ ಒಪ್ಪಿಸಿ ಸಂಗ್ರಹಿಸಿಟ್ಟುಕೊಂಡು ಮುಂದೆ ಬೇಕಾದಾಗ ಮರಳಿ ತಂದುಕೊಂಡು ಮತ್ತೊಮ್ಮೆ ಪ್ರಜ್ಞಾವಸ್ಥೆಗೆ ಒಪ್ಪಿಸುವ ಕಾರ್ಯವೇ ನೆನಪು.

	ಇದರ ಗುರಿ ವ್ಯವಸ್ಥಾತ್ಮಕವದ್ದು. ಒಬ್ಬ ವ್ಯಕ್ತಿ ತನ್ನ ಅನುಭವಗಳಿಂದ ಲಾಭ ಪಡೆಯುವಲ್ಲಿ ಇದು ತುಂಬ ಸಹಾಯಕವಾಗುತ್ತದೆ. ಅಂತೆಯೇ ಪರಿಸರಕ್ಕೆ ಹೊಂದಾಣಿಕೆ ಕನಿಷ್ಠ ಶ್ರಮದಿಂದ ಸಾಧಿತವಾಗುವಂತೆ ಇದು ಮಾಡುತ್ತದೆ.

	ನೆನಪು ಮೂರು ಅಗತ್ಯ ಪ್ರಕ್ರಿಯೆಗಳ ಆಧಾರದ ಮೇಲೆ ನಿಂತಿದೆ: 1. ಗ್ರಹಣ ಅಥವಾ ದಾಖಲೆ (ರಿಜಿಸ್ಟ್ರೇಷನ್)-ಕೇಂದ್ರ ನರಮಂಡಲದಲ್ಲಿ ಅನುಭವವನ್ನು ದಾಖಲು ಮಾಡಿಟ್ಟುಕೊಳ್ಳುವ ಸಾಮಥ್ರ್ಯ. 2. ಧಾರಣೆ (ರಿಟೆನ್‍ಷನ್)-ದಾಖಲೆ ಮಾಡಿಟ್ಟುಕೊಂಡ ಅನುಭವವನ್ನು ಬಹಳ ಕಾಲ ಉಳಿಸಿಕೊಳ್ಳುವುದು, 3. ಸ್ಮರಣೆ (ರಿಕಾಲ್)- ಪೂರ್ವದಲ್ಲಿ ದಾಖಲೆ ಮಾಡಿಟ್ಟುಕೊಂಡ ಅನುಭವವನ್ನು ಪ್ರಜ್ಞಾಪೂರ್ವಕವಾಗಿ ಜಾಗೃತಗೊಳಿಸಿ ಶ್ರುತಪಡಿಸುವ ಸಾಮಥ್ರ್ಯ.

	ಶೀಘ್ರವಾಗಿ ಮತ್ತು ನಿಷ್ಕøಷ್ಟವಾಗಿ ದತ್ತಾಂಶಗಳನ್ನು ದಾಖಲೆ ಮಾಡಿಕೊಳ್ಳುವ, ಇವನ್ನು ಹೆಚ್ಚು ಕಾಲ ಧಾರಣ ಮಾಡಿಟ್ಟುಕೊಳ್ಳುವ, ವಾಸ್ತವತೆಗೆ ಸಂಬಂಧಿಸಿದ ಪರಸ್ಥಿತಿಗಳಲ್ಲಿ ಈ ದತ್ತಾಂಶಗಳನ್ನು ಹಿಂಗರೆಯುವ ಸಾಮಥ್ರ್ಯವೇ ಒಳ್ಳೆಯ ನೆನಪು. ಬುದ್ಧಿವಂತಿಕೆಗೆ ಬೇಕಾಗುವ ಸಂಕೀರ್ಣ ತೆರನ ಬೌದ್ಧಿಕ ಸಾಮಥ್ರ್ಯಗಳಲ್ಲಿ ಒಳ್ಳೆಯ ನೆನಪೂ ಒಂದು.

	ನೆನಪಿನಲ್ಲಿ ಎರಡು ವಿಧ : 

	1. ಕುರುಡು ನೆನಪು (ರೋಟ್ ಮೆಮೊರಿ)-ಅರ್ಥದ ಕಡೆ ಗಮನ ಹರಿಸದೆ ದತ್ತಾಂಶಗಳನ್ನು ಪದಶಃ ಹಿಡಿದಿಟ್ಟುಕೊಳ್ಳುವುದು ಮತ್ತು ಹಾಗೆಯೇ ಮರಳಿ ಶ್ರುತಪಡಿಸುವುದು.

	2 ತರ್ಕಬದ್ಧ ನೆನಪು (ಲಾಜಿಕಲ್ ಮೆಮೊರಿ)- ವಾಸ್ತವ ಪರಿಸ್ಥಿತಿಗಳಿಗೆ ಸಂಬಂಧಿಸಿದ ಗುರಿಗಳನ್ನು ಗಮನದಲ್ಲಿಟ್ಟುಕೊಂಡು ಸಮಸ್ಯೆಗಳನ್ನು ಪರಿಹರಿಸುವುದೇ ಈ ತೆರನ ನೆನಪಿಗೆ ಮುಖ್ಯ ಉದ್ದೇಶ.

	ನೆನಪಿನಲ್ಲಿ ಗುಣಾತ್ಮಕ ವ್ಯತ್ಯಾಸಗಳುಂಟು. ಕೆಲವರಲ್ಲಿ ದೃಷ್ಟಿ ಸಂಬಂಧದ ನೆನಪು ತೀವ್ರವಾಗಿದ್ದು ದೃಗ್ಗೋಚರ ರೂಪ ಆಕಾರಗಳನ್ನು ತುಂಬ ಸ್ಫುಟವಾಗಿ ಜ್ಞಾಪಿಸಿಕೊಳ್ಳಬಲ್ಲರು. ಇವರಿಗೆ ನೋಟ ನೆನಪಿನ (ಐಡೆಟಿಕ್) ವ್ಯಕ್ತಿಗಳೆಂದು ಹೆಸರು. ಈ ಸಾಮಥ್ರ್ಯ ಬಾಲ್ಯದಲ್ಲಿ ಚುರುಕಾಗಿದ್ದು ವಯಸ್ಸಾದಂತೆ ಕಡಿಮೆಯಾಗುತ್ತದೆ.

	ಸಂಗೀತ, ಗಣಿತ, ನೃತ್ಯ ಮುಂತಾದ ಕಲೆಗಳಲ್ಲಿ ಕಾಣುವ ಸ್ನಾಯುಚಲನೆ, ಸ್ಥಳ ಸಂಬಂಧ ಮತ್ತು ಭಾವನಾತ್ಮಕ ಅನುಭವಗಳ ನೆನಪನ್ನು ಅಶಾಬ್ಧಿಕ ನೆನಪು ಎನ್ನಲಾಗುತ್ತದೆ.

	ನೆನಪಿನ ಕ್ರಿಯಾವ್ಯವಸ್ಥೆ : ನೆನಪಿನ ಪ್ರಕ್ರಿಯೆಯಲ್ಲಿ ಪ್ರಧಾನ ಮಸ್ತಿಷ್ಕದ ರಗಟೆ ಪಾತ್ರವಹಿಸುತ್ತದೆ. ಆದರೆ ಗಣಕದ ನೆನಪಿನ ಭಂಡಾರದಲ್ಲಿ ಒಂದೊಂದು ಎಲೆಕ್ಟ್ರಾನಿಕ್ ಕೋಶದಲ್ಲಿ ಮಾಹಿತಿಯ ತುಣುಕು ಸಂಗ್ರಹವಾಗಿರುವಂತೆ ಇಲ್ಲಿ ಆಗುವುದಿಲ್ಲ. ರಗಟೆಯ ತುಂಬ ಹರಡಿಕೊಂಡು ಎಲ್ಲೂ ಕೇಂದ್ರೀಕೃತವಾಗದೆ ನೆನಪು ಧಾರಣೆಯಲ್ಲಿ ಉಳಿಯುತ್ತದೆ. ರಗಟೆಯಲ್ಲಿ ಅರ್ಧದಷ್ಟನ್ನು ತೆಗೆದು ಹಾಕಿದರೆ ನೆನಪಿನ ಸಾಮಥ್ರ್ಯ ಅಷ್ಟಕ್ಕಷ್ಟು ಇಳಿಯುವುದಾದರೂ ನಿರ್ದಿಷ್ಟ ನೆನಪುಗಳು ಹಾಳಾಗಿ ಹೋಗುವುದಿಲ್ಲ.

	ನೆನಪಿನಲ್ಲಿ ಮೂರು ಮಟ್ಟಗಳಿವೆಯೆಂಬುದಕ್ಕೆ ಇತ್ತೀಚಿನ ಪ್ರಯೋಗಗಳಿಂದ ಪುರಾವೆ ದೊರೆತಿವೆ. 1 ಕೆಲವೇ ಸೆಕೆಂಡುಗಳಿಗಿಂತ ಹೆಚ್ಚು ಕಾಲ ಇರದಂಥ ಹೃಸ್ವಾವಧಿಯ ನೆನಪು ಕೆಳಮಟ್ಟದ್ದು. ಜೀವನದ ಪ್ರತಿಕ್ಷಣದಲ್ಲೂ ನೂರಾರು ಅರಿವಿನ ಅನುಭವಗಳು ಮಿದುಳಿಗೆ ಸಾಗುತ್ತಿರುವುವು, ಅಂತೆಯೇ ತಡವಿಲ್ಲದೆಯೇ ಅಳಿಸಿಹೋಗುವುವು.

	2 ಮಧ್ಯಮ ರೀತಿಯ ನೆನಪು ಕೆಲವು ನಿಮಿಷಗಳಿಂದ ಹಿಡಿದು ಕೆಲವು ಗಂಟೆಗಳ ಕಾಲ ಇರುವಂಥದು. ಉದಾಹರಣೆಗೆ ಪರೀಕ್ಷೆಗೆಂದು ಉರು ಹಚ್ಚುವುದು.

	3 ಮಿದುಳನ್ನು ಹೋಗುವ ಎಲ್ಲ ತೆರನ ಅನುಭವಗಳನ್ನು, ಮಾಹಿತಿಗಳನ್ನು ಜರಡಿ ಹಿಡಿದು ಉಳಿಯುವ ಕೆಲವೇ ಕೆಲವನ್ನು ಮುಖ್ಯತೆ, ಉಪಯುಕ್ತತೆ ಮತ್ತು ಸ್ಪಷ್ಟತೆಯ ದೃಷ್ಟಿಯಿಂದ ಸಂಗ್ರಹಿಸಿಟ್ಟುಕೊಳ್ಳುವುದೇ ಉನ್ನತ ಮಟ್ಟದ ಅಥವಾ ದೀರ್ಘಾವಧಿಯ ನೆನಪು. ಮಿದುಳಿನಲ್ಲಿ ಶಾಶ್ವತವಾಗಿ ದಾಖಲೆಯಾಗಲು ಇದಕ್ಕೆ ಸಮಯ ಹಿಡಿಯುತ್ತದೆ. ಈ ತೆರನ ನೆನಪಿನಲ್ಲಿ ಕೋಡ್ಪರೆಯಂಚಿನ (ಲಿಂಬಿಕ್) ಮಿದಿಳು ಬಲು ಮುಖ್ಯ ಪಾತ್ರ ವಹಿಸುತ್ತದೆ.

	ಹೊರಗಿನ ಪ್ರೇರಣೆಗಳು ಪ್ರತಿವರ್ತಿಸುವ ಮಂಡಲಗಳನ್ನುಂಟುಮಾಡುವುವು. ತತ್ಫಲವಾಗಿ ನೆನಪಿನ ಪ್ರಕ್ರಿಯೆಗಳು ಆರಂಭವಾಗುತ್ತವೆ. ಪ್ರತಿವರ್ತಿಸುವ ಮಂಡಲಗಳ ಚಟುವಟಿಕೆಯಿಂದಾಗಿ ವಿದ್ಯುತ್ ಮತ್ತು ರಾಸಾಯನಿಕ ಬದಲಾವಣೆಗಳ ವಿನ್ಯಾಸಗಳುಂಟಾಗುವುವು. ಇವೇ ಶಾಶ್ವತ ನೆನಪಿನ ಆರಂಭಘಟ್ಟ. ನೆನಪು ಹೇಗೆ ರೂಪುಗೊಳ್ಳುತ್ತದೆ ಎಂಬುದನ್ನು ವಿವರಿಸಲು ಮುಂದೆ ಇಟ್ಟಿರುವ ಪರಿಕಲ್ಪನೆಗಳ ಪೈಕಿ ಒಂದು ಹೀಗಿದೆ: ಕೇಂದ್ರ ನರಮಂಡಲದಲ್ಲಿ ಸಂಗ್ರಹ ಮಾಡಿಡಲು ಮಾಹಿತಿ ಪಸರಿಸುವ ಚಟುವಟಿಕೆಯ ವಿಭವಗಳ ಆವರ್ತ ಲಕ್ಷಣಗಳ ರೂಪದ ಸಂಕೇತಗಳಾಗಿ ಬದಲಾಗುತ್ತದೆ. ನರಗಳ ಪೊರೆಗಳೂ ತಮ್ಮ ಪ್ರೋಟೀನ್ ಮತ್ತು ರೈಬೋಸ್ ನ್ಯೂಕ್ಲಿಯಿಕ್ ಹಾಗೂ ಡಿಆಕ್ಸಿ ರೈಬೋಸ್ ನ್ಯೂಕ್ಲಿಯಿಕ್ ಆಮ್ಲಗಳ ಬದಲಿಕೆಯಿಂದ ಈ ಸಂಕೇತಗಳಿಗೆ ಹೊಂದಿಕೊಳ್ಳುತ್ತದೆ.

	ನೆನಪಿನ ಅಸ್ವಸ್ಥತೆಗಳು : 1 ಸ್ಮøತಿನಾಶ (ಆಮ್ನೀಸಿಯ) (1) ಆಂಗಿಕ ಸ್ಮøತಿನಾಶ- ಮಿದುಳಿನ ಹಾನಿಯಿಂದ  ಉಂಟಾಗುವಂಥದು. ಇದರಲ್ಲಿ ದಾಖಲೆ ಮತ್ತು ಧಾರಣೆಗಳ ದುರ್ಬಲತೆ ಇರುತ್ತದೆ.

	(2) ಮನೋಜಾತ ಸ್ಮøತಿನಾಶ : ಮಿದುಳಿನಲ್ಲಿ ವಿಕೃತಿಯಿರುವುದಿಲ್ಲ. ಅನುಭವವನ್ನು ನೆನೆಸುವ ಸಾಮಥ್ರ್ಯ ನಷ್ಟವಾಗಿರುತ್ತದೆ.

ಆಂಗಿಕ ಸ್ಮøತಿನಾಶ : ಇದರಲ್ಲಿ ಕಾರ್ಸ್‍ಕಾಫನ ರೋಗಕೂಟ, ಮುಪ್ಪಿನ ಚಿತ್ತ ವಿಕಲತೆ, ಘಾಸಿಯಿಂದುಂಟಾಗುವ ಸ್ಮøತಿನಾಶ ಮತ್ತು ಚಿತ್ತ ವಿಕಲತೆ ಎಂಬ ನಾಲ್ಕು ವಿಧಗಳುಂಟು.

(ಅ) ಕಾರ್ಸ್‍ಕಾಫನ ರೋಗಕೂಟ: ಇದು ಅನೇಕ ವರ್ಷ ಕಾಲ ಮದ್ಯಪಾನಮಾಡುವವರಲ್ಲಿ ಕಾಣಬರುತ್ತದೆ. ಬಿ1 ವಿಟಮಿನ್ನಿನ ಕೊರತೆಯಿಂದಲೂ ಕಾಣಿಸಿಕೊಳ್ಳುವುದುಂಟು. ಇದರ ಮುಖ್ಯ ಲಕ್ಷಣವೆಂದರೆ ಇತ್ತೀಚಿನ ಮತ್ತು ಪ್ರಚಲಿತ ಘಟನೆಗಳ ಸಂಪೂರ್ಣ ಮರೆವು. ಇದರಿಂದ ನರಳುವ ರೋಗಿಗಳು ಹೊಸ ವಿಷಯಗಳನ್ನು ಒಂದು ಅಥವಾ ಎರಡು ನಿಮಿಷಗಳಿಗಿಂತ ಹೆಚ್ಚು ಕಾಲ ಉಳಿಸಿಕೊಂಡಿರಲಾರರು. ಇಂಥವರು ತಮ್ಮ ನೆನಪಿನ ನ್ಯೂನತೆಗಳನ್ನು ಮುಚ್ಚಿಡುವ ಸಲುವಾಗಿ ಹರಟೆಯಲ್ಲಿ ತೊಡಗುವರು. ಭ್ರಾಂತಿ, ಯಾವುದೇ ಕಾರ್ಯದಲ್ಲಿ ತೊಡಗುವುದರಲ್ಲಿ ನಿರುತ್ಸಾಹ ಮತ್ತು ತಮ್ಮ ಬೇನೆಯ ಅರಿವಿಲ್ಲದಿರುವುದು. ಈ ರೋಗಿಗಳ ಇನ್ನು ಕೆಲವು ಲಕ್ಷಣಗಳು. ಆದರೆ ಈ ರೋಗದಲ್ಲಿ ಅಲ್ಪಾವಧಿ ನೆನಪು ಮಾತ್ರ ನಷ್ಟಗೊಂಡಿರುತ್ತದೆ. ದೀರ್ಘಾವಧಿಯ ಇಲ್ಲವೆ ಕ್ರೋಡೀಕರಿಸಲ್ಪಟ್ಟ ನೆನಪು ಮಾತ್ರ ಹಾನಿಗುಂದದೆ ಇರುವುದು.

	(ಆ) ಮುಪ್ಪು ಕೂಡ ಇತ್ತೀಚಿನ ನೆನಪಿನ ಹಾನಿಯಿಂದ ಕೂಡಿದೆ. ಜೊತೆಗೆ ಚಿತ್ತಭ್ರಮಣೆ (ಗೊಂದಲ) ಮತ್ತು ಅನುಕ್ರಮದ ಕಾರ್ಯಗಳನ್ನು ನಡೆಸುವಲ್ಲಿ ಮಂದತೆ- ಇವು ಇತರ ಲಕ್ಷಣಗಳು.

	(ಇ) ಫಾಸಿಯಿಚಿದ ಉಂಟಾಗುವ ಸ್ಮøತಿನಾಶ: ತಲೆಗೆ ಅಪಘಾತವಾದಾಗ ಎರಡು ತೆರನ ಸ್ಮøತಿನಾಶಗಳುಂಟಾಗಬಹುದು. ಹಿಂಚಾಲಕ ಸ್ಮøತಿನಾಶ ಅಂದರೆ ಅಪಘಾತವಾಗುವುದಕ್ಕೆ ಮುಂಚಿನ ವಿಷಯಗಳ ಮರೆವು ಮೊದಲನೆಯದು. ಅಪಘಾತವಾದ ತರುವಾಯದ ಸ್ಮøತಿನಾಶ ಅಂದರೆ ಅಪಘಾತವಾದ ಅನಂತರ ನಡೆಯುವ ವಿಷಯಗಳ ಮರೆವು ಎರಡನೆಯದು. ಈ ಎರಡು ತೆರನ ಸ್ಮøತಿನಾಶಗಳ ಅವಧಿ ತಲೆಗೆ ಆಗುವ ಅಪಘಾತದಿಂದ ಮಿದುಳಿನಲ್ಲಿ ಉಂಟಾಗುವ ಹಾನಿಯ ಪ್ರಮಾಣಕ್ಕೆ ನೇರ ಅನುಪಾತದಲ್ಲಿದೆ.

	(ಈ) ಚಿತ್ತವಿಕಲತೆ: ಬುದ್ಧಿ ಸಾಮಥ್ರ್ಯದ ಇಳಿತ ಇದರ ಮುಖ್ಯ ಲಕ್ಷಣ. ಇದು ಹಲವಾರು ಕಾರಣಗಳಿಂದ ಉಂಟಾಗಬಹುದು. ಮರಳಿ ನೆನಪಿನ ಸಾಮಥ್ರ್ಯವನ್ನು ಪಡೆಯಲಾಗುವುದಿಲ್ಲ. ಚಿತ್ತ ಭ್ರಮಣೆ, ಅಮೂರ್ತ ಕಲ್ಪನೆಗಳನ್ನು ಪರಿಭಾವಿಸುವ ಸಾಮಥ್ರ್ಯದ ಹನಿ, ಬುದ್ಧಿಯ ಹಾಗೂ ವಿವೇಚನೆಯ ಹಾನಿ- ಇವು ಇದರ ಲಕ್ಷಣಗಳು.

	ಮನೋಜಾತ ಸ್ಮøತಿನಾಶ : ಮನಸ್ಸಂಬಂಧವಾದ ಕಾರಣಗಳಿಂದಾಗಿ ಮಿದುಳಿನಲ್ಲಿ ಸಂಗ್ರಹಗೊಂಡ ಅನುಭವಗಳನ್ನು ಸ್ಮರಿಸಿಕೊಳ್ಳುವ ಸಾಮಥ್ರ್ಯ ಹಾನಿಗೊಳಗಾಗಿರುವುದು, ತಡೆದುಕೊಳ್ಳಲಾರದಷ್ಟು ನೋವನ್ನು ಉಂಟುಮಾಡುವ ಮತ್ತು ಆತಂಕವನ್ನು ಕೆರಳಿಸುವಂಥ ಅನುಭವಗಳೇನಾದರೂ ಆಗಿದ್ದರೆ ಅಂಥವುಗಳ ವಿರುದ್ಧ ರಕ್ಷಣೆಯೊದಗಿಸಲು ಇಂಥ ಮರೆವು ಉಂಟಾಗಬಹುದು. ಕೆಲವು ತೆರನ ತೀವ್ರ ಉದ್ರೇಕಕಾರಿ ಅನುಭವಗಳಿಂದ ಇದು ಪ್ರಕ್ಷಿಪ್ತವಾಗುತ್ತದೆ. ಉದಾಹರಣೆಗೆ ಪ್ರೀತಿ ಪಾತ್ರರಾದವರ ಮರಣ, ಭೀತಿಕಾರಕ ಹಾಗೂ ಅಪಮಾನಕಾರಕ ಕಾರ್ಯವೆಸಗಿದ ಮೇಲೆ ಬಯಲಿಗೆ ಬರುವ ಭಯ. ಈ ಸ್ಮøತಿ ನಾಶದ ಉದ್ದೇಶ ನೋವು ಉಂಟುಮಾಡುವಂಥ ಇಲ್ಲವೆ ದೋಷವನ್ನು ಆರೋಪಿಸುವಂಥ ನೆನಪುಗಳನ್ನು ಪ್ರಜ್ಞೆಯಿಂದ ತೊಡೆದು ಹಾಕುವುದು. ಇಂಥ ಮರೆತುಹೋದ ನೆನಪುಗಳನ್ನು ಮತ್ತು ಅನುಭವಗಳನ್ನು ಮರಳಿ ಪ್ರಜ್ಞಾವಸ್ಥೆಗೆ ತರಲು ಹಲವು ತಂತ್ರಗಳುಂಟು-ಮನೋರಚನೆ, ಮುಕ್ತ ಒಡನಾಟ.

	II. ವಿಕಾರ ನೆನಪು (ಸುಳ್ಳು ಹಿಂಗರೆ): ಈ ರೋಗದಿಂದ ಬಳಲುವ ರೋಗಿ ನಡೆಯದೇ ಇರುವಂಥ ಘಟನೆಗಳು ನಿಜವಾಗಿ ನಡೆದವು ಎಂದು ದೃಢನಿಶ್ಚಯದಿಂದ ಹೇಳುವನಲ್ಲದೆ ಆ ಘಟನೆಗಳು ನಡೆದ ಬಗೆ ಹಾಗೂ ಪರಿಸ್ಥಿತಿಗಳನ್ನೂ ವಿವರಿಸುವನು. ಅಥವಾ ನಡೆದ ಸಂಗತಿಗಳಿಗೆ ಬಣ್ಣ ಕಟ್ಟಿ ಹೇಳುವನು. ಈ ರೀತಿ ಆಗುವುದು ಮುಪ್ಪಿನ ಮತಿವಿಕಲತೆಯಲ್ಲಿ. (ಸೆನೈಲ್ ಸೈಕೆಸಿಸ್) ಅದರಲ್ಲೂ ಮುಖ್ಯವಾಗಿ ಕಾರ್ಸ್ ಕಾಫನ ಮತಿವಿಕಲತೆಯಲ್ಲಿ.			(ಎಸ್.ಎಂ.ಸಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ